ಯೋಗ ಮುದ್ರಾಗಳು ಮತ್ತು ಅದರ ಆರೋಗ್ಯಕಾರಿ ಲಾಭಗಳು

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ವಿಶೇಷ ಮಹತ್ವ ಪಡೆದುಕೊಂಡಿದ್ದ ಯೋಗವು ತೂಕ ಇಳಿಸಿಕೊಳ್ಳಲು ಹಾಗೂ ದೇಹವನ್ನು ಸದೃಢವಾಗಿಡಲು ವ್ಯಾಯಾಮಕ್ಕಿಂತಲೂ ಹೆಚ್ಚು ಪರಿಣಾಮಕಾರಿ. ಆಧುನಿಕ ವಿಜ್ಞಾನದೊಂದಿಗೆ ನಿಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವ ಇದು ಇತರ ವಿಧದ ವ್ಯಾಯಾಮಕ್ಕಿಂತ ಹೆಚ್ಚಿನ ಆರೋಗ್ಯ ಲಾಭ ನೀಡುತ್ತದೆ.

ಯೋಗ ಕೇವಲ ಆಸನ ಅಥವಾ ಭಂಗಿ ಮಾತ್ರವಲ್ಲ. ಕೆಲವೊಂದು ಯೋಗ ಮುದ್ರಗಳ ತಿಳುವಳಿಕೆ ಹೆಚ್ಚಿನವರಿಗಿಲ್ಲ. ಯೋಗ ಮುದ್ರಾಗಳಿಂದ ಸಿಗುವ ಆರೋಗ್ಯ ಲಾಭವು ನಿಮನ್ನು ಅಚ್ಚರಿಗೀಡುಮಾಡುತ್ತದೆ. ಪ್ರತಿಯೊಂದು ಯೋಗ ಮುದ್ರವು ವಿಶೇಷವಾದಂತಹದ್ದು ಮತ್ತು ಅದನ್ನು ಸರಿಯಾದ ವಿಧಾನದ ಮೂಲಕ ಅಭ್ಯಾಸ ಮಾಡಬೇಕು.

ಈ ಎಲ್ಲಾ ಯೋಗ ಮುದ್ರಗಳಿಗೆ ಆಂತರಿಕ ಅರ್ಥವಿದೆ. ಉದಾಹರಣೆಗೆ ಇದರಲ್ಲಿ ಜ್ಞಾನ ಮುದ್ರಾ ಸಾಮಾನ್ಯವಾದದ್ದು. ಇದು ಜ್ಞಾನ ಮತ್ತು ಏಕಾಗ್ರತೆಯದ್ದಾಗಿದೆ. ಅದೇ ರೀತಿ ವಾಯು ಮುದ್ರಾ ಎಂದರೆ ಗಾಳಿ ಮತ್ತು ದೇಹದಲ್ಲಿನ ಗಾಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವುದು. ಎಲ್ಲಾ ಯೋಗ ಮುದ್ರಾಗಳು ಕೈ ಸನ್ನೆಗಳಾಗಿದ್ದು, ಇದು ಅದ್ಭುತ ಆರೋಗ್ಯ ಲಾಭವನ್ನು ನೀಡುತ್ತದೆ. ಇದನ್ನು ಏಕಾಂತದಲ್ಲಿ ಮಾಡುವಂತಿಲ್ಲ. ಈ ಮುದ್ರಾಗಳನ್ನು ಅಭ್ಯಸಿಸಲು ಅದರದ್ದೇ ಆದ ಸಮಯವಿದೆ.

ಈ ಮುದ್ರಾಗಳ ಆರೋಗ್ಯ ಲಾಭ ಪಡೆಯಲು ಕುಳಿತು, ನಿಂತು ಮತ್ತು ಮಲಗಿ ಕೆಲವೊಂದು ವಿಶೇಷ ಕೈ ಸನ್ನೆಗಳನ್ನು ಮಾಡಬೇಕಾಗುತ್ತದೆ. ಕೆಲವೊಂದು ಸಾಮಾನ್ಯ ಯೋಗ ಮುದ್ರಾಗಳು ಮತ್ತು ಅದರಿಂದ ನಿಮ್ಮ ದೇಹಕ್ಕಾಗುವ ಆರೋಗ್ಯ ಲಾಭಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.


1. ಜ್ಞಾನ ಮುದ್ರಾ
ಇದು ಜ್ಞಾನ ಮತ್ತು ಏಕಾಗ್ರತೆಗೆ ಇರುವ ಅತ್ಯಂತ ಸಾಮಾನ್ಯ ಯೋಗ ಮುದ್ರಾ. ಪದ್ಮಾಸನ ಹಾಕಿಕೊಂಡು ಬೆಳಗ್ಗೆ ಈ ಮುದ್ರಾವನ್ನು ಮಾಡಬೇಕು. ಇದು ಏಕಾಗ್ರತೆ ಹೆಚ್ಚಿಸುತ್ತದೆ, ನಿದ್ರಾಹೀನತೆ ಪರಿಹರಿಸುತ್ತದೆ ಮತ್ತು ಕೋಪದ ಸಮಸ್ಯೆ ನಿಭಾಯಿಸಲು ನೆರವಾಗುತ್ತದೆ.

2. ವಾಯು ಮುದ್ರಾ
ಈ ಮುದ್ರಾವು ನಿಮ್ಮ ದೇಹದ ಗಾಳಿಯನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಈ ಮುದ್ರಾವನ್ನು ನಿಂತು, ಕುಳಿತು ಅಥವಾ ಮಲಗಿ ದಿನದ ಯಾವುದೇ ಸಮಯದಲ್ಲೂ ಮಾಡಬಹುದು. ಇದು ದೇಹದಲ್ಲಿರುವ ಹೆಚ್ಚುವರಿ ಗಾಳಿಯನ್ನು ಹೊರಹಾಕಿ ಗ್ಯಾಸ್ ನಿಂದ ಉಂಟಾಗುವ ಎದೆನೋವನ್ನು ಕಡಿಮೆ ಮಾಡುತ್ತದೆ.

3. ಅಗ್ನಿಮುದ್ರಾ
ಇದು ದೇಹದಲ್ಲಿನ ಅಗ್ನಿಯ ಅಂಶವನ್ನು ಸಮತೋಲನದಲ್ಲಿಡುತ್ತದೆ. ಈ ಮುದ್ರಾವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಇದು ತೂಕ ಇಳಿಸುವ ಮುದ್ರಾ. ಇದು ಕೊಬ್ಬನ್ನು ಕರಗಿಸಿಸುತ್ತದೆ ಮತ್ತು ಜೀರ್ಣಕ್ರಿಯೆ ಹೆಚ್ಚಿಸುತ್ತದೆ.

4. ವರುಣ ಮುದ್ರಾ
ಈ ಮುದ್ರಾವು ನಿಮ್ಮ ದೇಹದಲ್ಲಿರುವ ನೀರಿನ ಅಂಶವನ್ನು ಸಮತೋಲನದಲ್ಲಿಡುತ್ತದೆ. ಇದು ನಿಮ್ಮ ದೇಹದ ಸೌಂದರ್ಯ ಹೆಚ್ಚಿಸುತ್ತದೆ. ನಿಮ್ಮ ಚರ್ಮಕ್ಕೆ ಕಾಂತಿ ನೀಡುತ್ತದೆ. ಯಾಕೆಂದರೆ ದೇಹದಲ್ಲಿರುವ ನೀರಿನ ಅಂಶಕ್ಕೆ ಚಾಲನೆ ನೀಡಿ ಅದು ಚರ್ಮವನ್ನು ಪೋಷಿಸುತ್ತದೆ.

5. ಪ್ರಾಣ ಮುದ್ರಾ
ಈ ಮುದ್ರಾವು ಜೀವನಕ್ಕೆ ಸಂಬಂದಿಸಿದ್ದು, ದಿನದ ಯಾವುದೇ ಸಮಯದಲ್ಲೂ ಮಾಡಬಹುದು. ಈ ಯೋಗ ಮುದ್ರಾವು ರೋಗನಿರೋಧಕ ಶಕ್ತಿಯನ್ನು ಸುಧಾರಿಸಿ, ದೃಷ್ಟಿಯನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಆಯಾಸವನ್ನು ಹೋಗಲಾಡಿಸಿ ಹೆಚ್ಚು ಉಲ್ಲಾಸದಿಂದ ಇರಲು ನೆರವಾಗುತ್ತದೆ.

6. ಪೃಥ್ವಿ ಮುದ್ರಾ
ಈ ಮುದ್ರಾವು ನಿಮ್ಮ ದೇಹದಲ್ಲಿ ಬ್ರಹ್ಮಾಂಡದ ಭೂಮಿಯ ಶಕ್ತಿಯನ್ನು ಉತ್ತೇಜಿಸುತ್ತದೆ. ಈ ಮುದ್ರಾವು ರಕ್ತದ ಚಲನೆ, ತಾಳ್ಮೆ ಹೆಚ್ಚಿಸುತ್ತದೆ. ಇದು ನಿಮ್ಮ ದೇಹದ ಎಲುಬು ಮತ್ತು ಸ್ನಾಯುಗಳ ಬಲವರ್ಧಿಸುತ್ತದೆ.

7. ಶೂನ್ಯ ಮುದ್ರಾ

ಶೂನ್ಯ ಮುದ್ರಾವು ಮುಖ್ಯವಾಗಿ ಸೂರ್ಯನ ಶಕ್ತಿಯನ್ನು ಸ್ಮರಿಸುತ್ತದೆ. ಸೂರ್ಯನ ಶಕ್ತಿಯನ್ನು ಪಡೆಯಲು ಮುಂಜಾನೆ ವೇಳೆ ಈ ಮುದ್ರಾವನ್ನು ಅಭ್ಯಸಿಸಬೇಕು.

8. ಲಿಂಗ ಮುದ್ರಾ

ಈ ಮುದ್ರೆಯು ಪುರುಷನ ಜನನಾಂಗದ ಸಂಕೇತವಾಗಿದೆ ಮತ್ತು ಇದರಿಂದಾಗಿ ಇದು ದೇಹದಲ್ಲಿ ಉಷ್ಣವನ್ನು ಉಂಟುಮಾಡುತ್ತದೆ. ಇದು ಕಾಮಾಸಕ್ತಿಯನ್ನು ಉತ್ತೇಜಿಸುವುದು ಮಾತ್ರವಲ್ಲದೆ ಶೀತಕ್ಕೆ ಸಂಬಂಧಪಟ್ಟ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ.

9. ಅಪಾನ ಮುದ್ರಾ

ಇದು ಬಹುಉಪಯೋಗಿ ಮುದ್ರಾವಾಗಿದ್ದು, ಪ್ರತಿಯೊಬ್ಬರಿಗೂ ನೆರವಾಗುತ್ತದೆ. ಅಪಾನ ಮುದ್ರಾವು ವಿಷಕಾರಿ ನೀರಿನಿಂದ ನಿಮ್ಮ ದೇಹವನ್ನು ಶುಚಿಗೊಳಿಸುತ್ತದೆ. ಮೂತ್ರದ ಸಮಸ್ಯೆ ನಿವಾರಿಸಲು ಮತ್ತು ಕರುಳಿನ ಚಲನೆಗಳನ್ನು ನಿಯಮಿತವಾಗಿಡುತ್ತದೆ.