Devotional Library
ಸ್ವಾಮಿ ದೇವನೇ ಲೋಕಪಾಲನೆ
ಹರಿ-ಹರ ಸ್ತುತಿ
ಸ್ವಾಮಿದೇವನೆ ಲೋಕಪಾಲನೆ ತೇನಮೋಸು ನಮೋಸುತೇ | ಪ್ರೇಮದಿಂದಲಿ ನೋಡು ನಮ್ಮನು ತೇನಮೋಸ್ತು ನಮೋಸ್ತುತೇ ||ಪ||
ನೇಮಿಸೆಮ್ಮೊಳು ಧರ್ಮಮಾರ್ಗವ ತೇನಮೋಸು ನಮೋಸುತೇ | ಕ್ಷೇಮದಿಂದಲಿ ಪಾಲಿಸೆಮ್ಮನು ತೇನಮೋಸ್ತು ನಮೋಸುತೇ ||
ದೇವದೇವನೆ ಹಸ್ತಪಾದಗಳಿಂದಲೂ ಮನದಿಂದಲೂ |
ನಾವು ಮಾಡಿದ ಪಾಪವಲ್ಲವ ಹೋಗಲಾಡಿಸು ಬೇಗನೆ
ಕಾವರಿಲ್ಲವು ನಿನ್ನ ಬಿಟ್ಟರೆ ದೇವನೇ ಜಗದೀಶನೇ |
ಜೀವಕೋಟಿಯು ನಿನ್ನಯೀ ಬೆಳಕಿಂದ ಜೀವಿಪುದಲ್ಲವೇ||
ರಾತ್ರಿ ನಿದ್ದೆಯ ಗೈವಕಾಲದಿ ನೀನೆ ನಮ್ಮನು ಕಾಯ್ದೆಯೆ
ಮಿತ್ರನೆಂಬುವ ನಾಮಧೇಯವು ಸತ್ಯವಾದುದು ನಿನ್ನೊಳು|
ಸ್ತೋತ್ರ ಮಾಡುವ ಹಾಗೆ ನಿನ್ನನು ಪಕ್ಷಿಗಳ್ ಧ್ವನಿಗೈವವೈ
ಚಿತ್ರಭಾನವೆ ನಿನ್ನ ನೋಡಿ ಎಲ್ಲಿ ಪೋದುದು ಕತ್ತಲೆ ||
ಉತ್ತಮೋತ್ತಮ ನಿನ್ನ ಪಾದದ ಭಕ್ತಿಯೇ ಸ್ಥಿರವಲ್ಲವೇ|
ಚಿತ್ತವೆಂಬುದು ಗಾಳಿಯಲ್ಲಿಹ ದೀಪದಂದದಿ ಚಂಚಲ |
ಮತ್ತರಾಗುತ ಬಿಟ್ಟು ನಿನ್ನನು ಕೆಟ್ಟಯೋಚನೆ ಗೈಯದಾ|
ಚಿತ್ತವನು ನಮಗಿತ್ತು ರಕ್ಷಿಸು ಪದ್ಮನಾಭ ಸುರೇಶನೆ ||
ಆಡುವಾಗಲು ನಾವು ಭೋಜನ ಮಾಡುವಾಗಲು ಸರ್ವದಾ|
ನೋಡಿನೀ ದಯದಿಂದಲೆಮ್ಮನು ಪಾಲಿಸೈ ಭಗವಂತನೇ |
ಬೇಡಿಕೊಂಬೆವು ನಮ್ಮ ದೇಹಕೆ ಸೌಖ್ಯವಂ ಬಲಪುಷ್ಟಿಯಂ
ನೀಡು ನಿನ್ನಯ ಪಾದಭಕ್ತಿಯನೆಂದಿಗೂ ಬಿಡಲಾರೆವೈ ||
ನಿನ್ನ ದರ್ಶನಗೈದ ನೇತ್ರದ ಜನ್ಮ ಸಾರ್ಥಕವಲ್ಲವೇ |
ನಿನ್ನ ಪೂಜಿಪ ಹಸ್ತವೇ ಬಹು ದೊಡ್ಡದಲ್ಲವೆ ಮಾಧವ |
ನಿನ್ನ ನಾಮವ ಪೇಳ್ವ ನಾಲಗೆ ಧನ್ಯವಲ್ಲವೆ ಲೋಕದಿ |
ನಿನ್ನ ಧ್ಯಾನಿಪ ಚಿತ್ರವೃತ್ತಿಯ ಯೋಗವಲ್ಲವೆ ಪರಶಿವ ||
ನೀನೆ ತಾಯಿಯು ನೀನೆ ತಂದೆಯು ನೀನೆಯೆಮ್ಮೊಡನಾಡಿಯು | ನೀನೆ ಬಂಧುವು ನೀನೆ ಭಾಗ್ಯವು ನೀನೆ ಬುದ್ಧಿಯು ಶಕ್ತಿಯು |
ನೀನು ಪಾಲಿಸದಿದ್ದೊಡೆಮ್ಮನು ಬೇರೆ ಪಾಲಿಪರಿಲ್ಲವೈ |
ದೀನ ಪಾಲನೆ ನಿನ್ನ ಧ್ಯಾನದೊಳಿರ್ಪ ನಮ್ಮನು ಪಾಲಿಸೈ ||
ಶ್ರೀ ಮುಕುಂದನೆ ಭೂಮಿಯಲ್ಲಿಯು ನೀರಿನಲ್ಲಿಯು ನೀನಿಹೆ | ವ್ಯೋಮದಲ್ಲಿಯು ಗಾಳಿಯಲ್ಲಿಯು ತೇಜದಲ್ಲಿಯು ನೀನಿಹೆ |
ರಾಮನೂ ನರಸಿಂಹನ ಪರಮಾತ್ಮನೂ ಕೃಷ್ಣನೂ ನೀನಿಲೈ |
ನೀ ಮಹಾತ್ಮನು ನಮ್ಮ ತಪ್ಪುಗಳೆಲ್ಲ ಮನ್ನಿಸಿ ಪಾಲಿಸೈ||
ಹರಿಯೆ ನೀನೆ ನಿನ್ನೊಳಡಗಿದೆ ಸರ್ವವು|
ನೀ ರಮೇಶನ ಭೇದ ರೂಪನು ನೀನುಮೇಶನೇ ಸತ್ಯವು|
ನೀರಜಾಸನ ಬ್ರಹ್ಮ ನೀನೇ ಆದಿಶಕ್ತಿ ಸ್ವರೂಪನೇ |
ನರನು ನಿನ್ನಲಿ ಭೇದವೆಣಿಸಲು ಭ್ರಾಂತನಲ್ಲವೆ ಆತನೆ ||
Tamil and Telugu text are not present in the supplied Firebase backup yet. Their fields are ready in WordPress for later entry.