Devotional Library
ಜಯನಮೋಹರ ಗೌರಿತನಯಗೆ
ಜಯ ನಮೋಹರ ಗೌರಿತನಯಗೆ
ಜಯನಮೋಹರ ಗೌರಿತನಯಗೆ ಜಯನಮೋ ಕರಿವದನಗೆ | ಜಯನಮೋ ಕರುಣಾಸಮುದ್ರಗೆ ಜಯನಮೋ ವಿಘ್ನರಾಜಗೆ || ಪ ||
ನಾಲ್ಕು ದಳದ ಕರ್ಣಿಕೆಯ ಮಧ್ಯದಿ ಲೋಕಚಕ್ಷುವಿನಂದದಿ |
ಜೋಕೆಯಿಂದಲಿ ಪೊರೆದು ಭಕ್ತರ ಶೋಕಮೋಹವ ಬಿಡಿಸಿದೆ ||
ಏಕದಂತನೆ ಏಕರೂಪನೆ ನಾಕವಾಸಿಗಳೊಡೆಯನೆ |
ಆಕೆ ಪಾರ್ವತಿ ಗರ್ಭಸಂಭವ ಲೋಕನಾಯಕ ಪಾಹಿಮಾಂ ||೧||
ಗಂಧ ಕಸ್ತುರಿ ಕುಂಕುಮಾಕ್ಷತೆ ತಂದು ಕೋಮಲ ದೂರ್ಮೆಯ |
ಮಂದಮಾರುಗ ಬಿಲ್ವಪತ್ರೆಗಳಿಂದ ಪೂಜೆಯ ಮಾಡಲು |
ನಿಂದು ಕರಗಳ ಮುಗಿದು ಜಯಜಯವೆಂದು ವಂದನೆ ಮಾಡಲು |
ಮಂದಹಾಸದಿ ಅಭಯಪಾಲಿಪಾನಂದ ಮೂರುತಿ ಪಾಹಿಮಾಂ || ೨ ||
ಉಂಡಲಿಗೆ ನೆನೆಗಡಲೆ ಚಗುಳಿಯು ಖಂಡಿಸಿದ ರಸದಾಳಿಯು |
ಬಂಡಿತುಂಬಿದ ಭಕ್ಷ್ಯದಡಿಗೆಯು ತಂಡತಂಡದ ಹರಕೆಯು |
ಖಂಡಿಸಕ್ಕರೆ ಪಾಲು ಘೃತಮಧು ಉಂಡು ಹರುಷದಿ ನಲಿಯುತ |
ಸುಂಡಿಲೊಲವುತ ವರವಕೊಡುವ ಪ್ರಚಂಡ ಗಣಪತಿ ಪಾಹಿಮಾಂ ||೩||
ಮೃಡನ ಮೆಚ್ಚಿಸಿ ಪಡೆದು ಲಿಂಗವ ಬಿಡದೆ ರಾವಣನೊಯ್ಯಲು |
ಒಡೆಯ ಕೇಶವ ನಿನ್ನ ಸ್ತುತಿಸಲು ಕಡಲತಡಿಯಲಿ ಆಡಿದೆ |
ಬೆಡಗಿನಿಂದಲಿ ದಡಿಗ ರಾವಣ ಕೊಡಲು ಹಸ್ತದಿ ಲಿಂಗವ |
ಪಿಡಿದು ಪೊಡವಿಯೊಳಿಡಿಸಿ ನಗುವ ಪ್ರಚಂಡ ಗಣಪತಿ ಪಾಹಿಮಾಂ || ೪ ||
ರಾಜಕಾರ್ಯವು ರಾಜನೀತಿಯು ರಾಜವಿದ್ಯೆಯ ಗೆಲಿಸಿದೆ |
ರಾಜಸೋತ್ತಮ ತತ್ತ್ವರೂಪನೆ ಮೂಜಗವ ನೀ ಸಲಹಿದೆ |
ತೇಜಿಯೆನಿಸುವ ಮೂಷಕನಮೇಲೋ ಜಗದಲೋಲಾಡಿದೆ |
ಓಜೆಯಿಂದಲಿ ನಮ್ಮ ಸಲಹುವ ಬೀಜ ಗಣಪತಿ ಪಾಹಿಮಾಂ || ೫||
ಪಂಚಬಾಣನ ವೈರಿಯುದರದೊಳಿಂಚಿನಂದದೊಳುದಿಸಿದೆ |
ಪಂಚಪಂಚೇಂದ್ರಿಯನು ಗೆಲುಪೊಡೆ ಸಂಚುವದನವ ತೋರಿದೆ |
ಜಂಚಲಾಂಬಕಿ ಕರ್ಣ ಬಿಸುಗೆಯೊಳ್ಮಿಂಚುವನು ನೀ ತರಿಸಿದೆ |
ಪಂಚಕಜ್ಞಾಯವನು ಮೆಲುವೊಡೆ ಚಿಂತೆ ಗಣಪತಿ ಪಾಹಿಮಾಂ ||೬||
ದುರಿತಗಿರಿಗಳಿಗ್ವಜ್ರನೆನಿಸಿದೆ ಪರಶುಪಾಶವ ಧರಿಸಿದೆ |
ಮುರಿಯೆ ಸುಂಡಿಲು ಮೋದಕಂಗಳು ಕರದೊಳುರಗನ ಸಲಹಿದೆ |
ಹಿರಿಯಡೊಳ್ಳಲಿ ಜಗವ ಸಲಹಿದೆ ಹಿರಿದುನಾಗನ ಸುತ್ತಿದೆ |
ಹರನವರಸುತ ಪರಮಮಂಗಳ ಚರಿತ ಗಣಪತಿ ಪಾಹಿಮಾಂ || ೭||
ಇಂದುಮೌಳಿಯ ಸುತನೆ ನಿನ್ನಯ ದ್ವಂದ್ವಚರಣವ ಸ್ತುತಿಸಲು |
ಛಂದ ಪ್ರಾಣ ಪ್ರಾಸವರಿಯದ ಮಂದಮತಿ ಈ ಬಾಲನು |
ಬಂದದುರಿತವ ಪರಿಹರಿಸಿ ಅನಂದ ಪದವಿಯ ಪಾಲಿಸೊ |
ಬಂದು ಇಡಗುಂದಿಯಲಿ ನೆಲಸಿದ ತಂದೆ ಗಣಪತಿ ಪಾಹಿಮಾಂ || ೮ ||
Tamil and Telugu text are not present in the supplied Firebase backup yet. Their fields are ready in WordPress for later entry.